ಪ್ರಭಂಜನ
ಮಣಿಪುರದ ರಾಜ. ಬಹಳ ಕಾಲದವರೆಗೆ ಮಕ್ಕಳಿರಲಿಲ್ಲವಾಗಿ ಶಿವನನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾಗಿ ಹೆಚ್ಚು ಮಕ್ಕಳಾಗುವುದಿಲ್ಲ ಎಂದೂ ಮುಂದೆ ವಂಶೋದ್ಧಾರಕ್ಕಾಗಿ ಒಬ್ಬೊಬ್ಬ ರಾಜನಿಗೂ ಒಬ್ಬೊಬ್ಬ ಮಗ ಮಾತ್ರ ಜನಿಸುತ್ತಾನೆ ಎಂದೂ ತಿಳಿಸಿದ. ಹೀಗೆಯೇ ಬಹಳ ಕಾಲದವರೆಗೆ ನಡೆದು ಬಂತು. ಪ್ರಭಂಜನನ ವಂಶದವನಾದ ಮಲಯಧ್ವಜನ ಕಾಲದಲ್ಲಿ ಮಾತ್ರ ಗಂಡು ಸಂತಾನವಾಗದೆ ಹೆಣ್ಣುಮಗು ಹುಟ್ಟಿತು. ಅವಳೇ ಚಿತ್ರಾಂಗದೆ. ಚಿತ್ರಾಂಗದೆ ಅರ್ಜುನನನ್ನು ಮೋಹಿಸಿ ಮದುವೆಯಾದಳು. ಈಕೆಯ ಹೊಟ್ಟೆಯಲ್ಲಿ ಹುಟ್ಟಿದವನೇ ಬಭ್ರುವಾಹನ. ಈತ ಯುದ್ಧದಲ್ಲಿ ತನ್ನ ತಂದೆಯನ್ನೇ ಕೊಲ್ಲುತ್ತಾನೆ. ಆದರೆ ಶ್ರೀಕೃಷ್ಣನ ಪ್ರಭಾವದಿಂದ ಅರ್ಜುನ ಮತ್ತೆ ಬದುಕುತ್ತಾನೆ. ಬಭ್ರುವಾಹನ ಮಣಿಪುರದ ಅರಸನಾಗುತ್ತಾನೆ.	
(ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ